ಪ್ರಹ್ಲಾದ	
ಒಬ್ಬ ಶ್ರೇಷ್ಠ ವೈಷ್ಣವ ಭಕ್ತ; ತಂದೆ ಹಿರಣ್ಯಕಶಿಪು, ತಾಯಿ ಕಯಾದು. ಸಂಹ್ಲಾದ, ಅನುಹ್ಲಾದ, ಶಿಬಿ ಮತ್ತು ಬಾಷ್ಕಲ ಎಂಬುವರು ಸೋದರರು. ಪ್ರಹ್ಲಾದ ಬಾಲ್ಯದಿಂದಲೂ ವಿಷ್ಣುಭಕ್ತ. ತಂದೆಯಾದರೊ ಶಿವನ ಭಕ್ತ, ಆತ ಮಗನನ್ನು ವಿಷ್ಣುಭಕ್ತಿಪಥದಿಂದ ಬಿಡಿಸಬೇಕೆಂದು ಅನೇಕ ಪ್ರಯತ್ನಗಳನ್ನು ಮಾಡಿದ. ಗುರು ಶಂಡಾಮರ್ಕರಿಗೆ ಬಾಲಕ ವಿಷ್ಣುಭಕ್ತಿಯನ್ನು ಬಿಡುವ ಹಾಗೆ ಮಾಡಿರೆಂದು ಆಜ್ಞೆಮಾಡಿದ. ಅವರು ಪ್ರಹ್ಲಾದನಿಂದ ಹರಿಭಕ್ತಿಯನ್ನು ತೊಲಗಿಸಲು ಬಹು ಪ್ರಯತ್ನಪಟ್ಟರು. ಆದರೆ ಅವರ ಪ್ರಯತ್ನಗಳೆಲ್ಲ ವ್ಯರ್ಥವಾದುವು. ಸಿಟ್ಟಿನಿಂದ ಹಿರಣ್ಯಕಶಿಪು ಪ್ರಹ್ಲಾದನಿಗೆ ವಿಷಕುಡಿಸುವ, ಸಮುದ್ರಕ್ಕೆ ನೂಕಿಸುವ, ಬೆಟ್ಟದ ಮೇಲಿಂದ ಉರುಳಿಸಿಬಿಡುವ ಶಿಕ್ಷೆಗಳನ್ನು ಕೊಟ್ಟ. ಏನಾದರೂ ಪ್ರಹ್ಲಾದ ವಿಷ್ಣುಭಕ್ತಿಯನ್ನು ಬಿಡದಿರಲು ಆಸ್ಥಾನದಲ್ಲಿ ಕುಳಿತು ನಿನ್ನ ಹರಿ ಎಲ್ಲಿದ್ದಾನೆ ಎಂದು ಪ್ರಹ್ಲಾದನನ್ನು ಪ್ರಶ್ನಿಸಿದ, ಪ್ರಹ್ಲಾದ ಅದಕ್ಕೆ ಆತ ಸರ್ವವ್ಯಾಪಿ ಎಂದು ಉತ್ತರವಿತ್ತ. ಹಿರಣ್ಯಕಶಿಪು ಆತ್ಯಂತ ಕೋಪದಿಂದ ಆಸ್ಥಾನದಲ್ಲಿನ ವಜ್ರಸ್ತಂಭವೊಂದನ್ನು ತೋರಿಸಿ ನಿನ್ನ ಹರಿ ಇಲ್ಲಿರುವನೇ ಎಂದು ಗರ್ಜಿಸಿದ. ಪ್ರಹ್ಲಾದ ಹೌದು ಎಂದು ಉತ್ತರವಿತ್ತ. ಆಗ ಹಿರಣ್ಯಕಶಿಪು ಕೋಪದಿಂದ ಆ ಕಂಬಕ್ಕೆ ಒದೆದ. ಭಕ್ತರ ಪ್ರಾಣವೇ ತನ್ನ ಪ್ರಾಣವೆಂಬ ಭಗವಂತ ಭಯಂಕರ ಗರ್ಜನೆಯನ್ನು ಮಾಡುತ್ತ ಆ ಕಂಭವನ್ನೇ ಸೀಳಿಕೊಂಡು ನರಸಿಂಹಾಕಾರದಿಂದ ಹೊರಬಂದ. ಆಗ ಸಂಧ್ಯಾಕಾಲದ ಸಮಯ; ನರಸಿಂಹ ಹಿರಣ್ಯಕಶಿಪುವನ್ನು ಹಿಡಿದೆತ್ತಿಕೊಂಡು ಅರಮನೆಯ ಒಳಗೂ ಹೊರಗೂ ಅಲ್ಲದ ನಡುವಣ ಸ್ಥಾನವಾದ ಹೊಸ್ತಿಲದ ಮೇಲೆ ಕುಳಿತು ತನ್ನ ತೊಡೆಯ ಮೇಲೆ ಅವನನ್ನು ಹಾಕಿಕೊಂಡು ನಖಗಳಿಂದ ಸೀಳಿಕೊಂದ ಆ ದಿನವನ್ನು ಇಂದಿಗೂ ನರಸಿಂಹಜಯಂತಿ ಎಂದು ಆಚರಿಸುತ್ತಾರೆ. ಈ ಒಂದು ಸನ್ನಿವೇಶವನ್ನು ಭಕ್ತರು ನಖಸ್ತುತಿ ಎಂದು ಸ್ತುತಿಸುವುದುಂಟು. ಅನಂದವರ್ಧನನ ಧ್ವನ್ಯಾಲೋಕದ ಆಶೀಪದ್ಯವೂ ಶ್ರೀಮದಾನಂದತೀರ್ಥರ ಶ್ರೀನರಸಿಂಹನಖಸ್ತುತಿ ಎಂಬುದೂ ಬಹು ಪ್ರಸಿದ್ಧ.

ಹಿರಣ್ಯಕಶಿಪುವಿನ ಮರಣಾನಂತರ ಶುಕ್ರಾಚಾರ್ಯರು ಪ್ರಹ್ಲಾದನಿಗೆ ರಾಕ್ಷಸ ಸಾಮ್ರಾಜ್ಯದ ಪಟ್ಟ ಬಂಧೋತ್ಸವವನ್ನು ಮಾಡಿದರು. ಈತನಿಗೆ ವಿರೋಚನ, ಕುಂಭ, ನಿಕುಂಭ ಎಂಬ ಗಂಡುಮಕ್ಕಳೂ ರಚನೆ ಅಥವಾ ವಿರೋಚನೆ ಎಂಬ ಹೆಣ್ಣುಮಗಳೂ ಜನಿಸಿದರು. ವಿಶ್ವರೂಪಾಚಾರ್ಯ ಈಕೆಯ ಮಗ. ವಿರೋಚನನ ಮಗ ಶಿಬಿಯಲ್ಲಿ ಪ್ರಹ್ಲಾದನಿಗೆ ಬಲಿ ಎಂಬ ಮೊಮ್ಮಗನೂ ಆತನ ಮಗ ಬಾಣಾಸುರನೂ ಹುಟ್ಟಿ ಬಹಳ ಪ್ರಸಿದ್ಧರಾದರು.

	ಮಧ್ವಮತದ ಸಂಪ್ರದಾಯದಲ್ಲಿ ನರಹರಿತೀರ್ಥರನ್ನು ವ್ಯಾಸರಾಯರನ್ನು ಮತ್ತು ಮಂತ್ರಾಲಯದ ರಾಘವೇಂದ್ರರಾಯರನ್ನು ಪ್ರಹ್ಲಾದನ ಅವತಾರಗಳೆಂದು ಭಾವಿಸಲಾಗಿದೆ. ಪ್ರಹ್ಲಾದ ಚರಿತ್ರೆ ಕೆಲವು ಯಕ್ಷಗಾನಗಳಿಗೂ ಕಾವ್ಯಗಳಿಗೂ ಹರಿಕಥೆಗಳಿಗೂ ವಸ್ತುವಾಗಿದೆ.	
(ಎಸ್.ಎಸ್.ಜೆಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ